ಪರ್ಲ್ ಹಾರ್ಬರ್ - 
	ಹವಾಯಿ ದ್ವೀಪಗಳಲ್ಲಿ ಹಾನಲೂಲೂವಿಗೆ ಸುಮಾರು 10 ಕಿಮೀ. ಪಶ್ಚಿಮಕ್ಕೆ ಅವಾಹೂ ದ್ವೀಪದ ದಕ್ಷಿಣ ಕಡಲ ಚಾಚು. ಇದೊಂದು ಭೂಸೀಮಿತ ರೇವು, ಅಮೆರಿಕ ಸಂಯುಕ್ತ ಸಂಸ್ಥಾನಗಳ ಪೆಸಿಫಿಕ್ ನೌಕಾಧಿಪತ್ಯ ಕೇಂದ್ರ ಇದು 26 ಚ.ಕಿಮೀ. ವಿಸ್ತೀರ್ಣದ ಯಾನಯೋಗ್ಯ ಜಲಪ್ರದೇಶವನ್ನೊಳಗೊಂಡಿದೆ. ಇಲ್ಲಿ ನೂರಾರು ಲಂಗರು ನೆಲೆಗಳಿವೆ. ಇದರ ಮುಖದ ಬಳಿ ಅಡಚಣೆಯಾಗಿದ್ದ ಹವಳದ ದಿಣ್ಣೆಯ ಹೂಳನ್ನು ಎತ್ತಿಹಾಕಬೇಕೆಂದು ಇಲ್ಲಿ ಸರ್ವೆ ನಡೆಸಿದ ಅಮೆರಿಕನ್ ನೌಕಾ ಪಡೆಯ ಲೆ. ಚಾಲ್ರ್ಸ್ ವಿಲ್ಕ್ಸ್ 1840ರಲ್ಲಿ ಸಲಹೆ ಮಾಡಿದ. ಅಮೆರಿಕ ಈ ರೇವಿನ ಮೇಲೆ ಹಕ್ಕು ಪಡೆಯಬೇಕೆಂದು ಮೂವತ್ತು ವರ್ಷಗಳ ಅನಂತರ ಸಲಹೆ ಬಂತು. 1887ರ ಕೌಲಿನ ಪ್ರಕಾರ ಅಮೆರಿಕಕ್ಕೆ ಈ ರೇವನ್ನು ಉಪಯೋಗಿಸಿಕೊಳ್ಳುವ ಸಂಪೂರ್ಣ ಹಕ್ಕು ಲಭಿಸಿತು. 1898ರ ಅನಂತರವೇ ಇಲ್ಲಿ ಕೆಲಸ ಪ್ರಾರಂಭವಾದದ್ದು. ಆಗ ಸ್ಪೇನ್-ಅಮೆರಿಕ ಯುದ್ಧ ಎಷ್ಟೆಂಬುದು ಆಗ ವೇದ್ಯವಾಯಿತು. 1908ರಲ್ಲಿ ಇಲ್ಲಿ ನೌಕಾ ನಿಲುದಾಣ ಸ್ಥಾಪಿತವಾಯಿತು. 1919ರಲ್ಲಿ ಇಲ್ಲಿ ಒಣಕಟ್ಟೆಯ ನಿರ್ಮಾಣದ ಕೆಲಸ ಪೂರೈಸಿತು.

	1939ರಲ್ಲಿ ಎರಡನೆಯ ಮಹಾಯುದ್ಧ ಆರಂಭವಾದ ಮೇಲೆ ಪರ್ಲ್ ಹಾರ್ಬರಿನ ನೌಕಾನಿಲ್ದಾಣವನ್ನು ಅಭಿವೃದ್ಧಿಗೊಳಿಸುವ ಕಾರ್ಯ ಕೈಗೊಳ್ಳಲಾಯಿತು. 1941ರ ಡಿಸೆಂಬರ್ 7ರಂದು ಜಪಾನಿ ವಿಮಾನ ಪಡೆ ಇಲ್ಲಿಯ ಸೇನಾ ಸ್ಥಾವರಗಳ ಮೇಲೆ ಥಟ್ಟನೆ ದಾಳಿ ಮಾಡಿತು. ಇಲ್ಲಿ ಸುಮಾರು 100 ನೌಕೆಗಳಿದ್ದವು ನೌಕಾ ಮತ್ತು ವಾಯು ಪಡೆಗಳೂ ಇದ್ದುವು. ದಾಳಿಯ ಫಲವಾಗಿ 2,000 ಜನ ಸತ್ತರು. ಇಲ್ಲಿದ್ದ ಎಂಟು ಯುದ್ಧ ಹಡಗುಗಳೂ ನಷ್ಟಕ್ಕೆ ಒಳಗಾದವು ಮೂರು ಹಡಗುಗಳು ನಾಶವಾದುವು. ಒಂದು ಅಡಿಮೇಲಾಯಿತು. ಆರಿಜೋóನ ಎಂಬ ನೌಕೆ ಮುಳುಗಿತು. ಅದರೊಂದಿಗೆ 1,102 ನಾವಿಕರು ನಷ್ಟವಾದರು. ಇದು ಆ ದಾಳಿಯ ಮಹಾ ಅನಾಹುತ. ಈಗ ಆ ಎಡೆಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಈ ದಾಳಿಯ ಫಲವಾಗಿ ಅಮೆರಿಕ ಎರಡನೆಯ ಮಹಾಯುದ್ಧವನ್ನು ಪ್ರವೇಶಿಸಿತು. ಯುದ್ಧದ ಸ್ವರೂಪವೇ ಬದಲಾಯಿತು. ಇತಿಹಾಸದಲ್ಲಿ ಹೊಸ ತಿರುವೊಂದಕ್ಕೆ ಈ ಘಟನೆ ನಿಮಿತ್ತವಾಯಿತು. 

	ಈಗ ಪರ್ಲ್ ಹಾರ್ಬರಿನಲ್ಲಿ ನೌಕಾಂಗಣವೂ ಸರಬರಾಜು ಕೇಂದ್ರವೂ ಜಲಾಂತರ್ಗಾಮಿ ನೆಲೆಯೂ ಇವೆ. ದುರಸ್ತಿ, ನಿರ್ವಹಣೆ, ಹೊಸ ಹಡಗು ನಿರ್ಮಾಣ ಮುಂತಾದವಕ್ಕೆ ಸೌಲಭ್ಯಗಳಿವೆ. ಪರ್ಯಾಯದ್ವೀಪದ ಮೇಲೆ ನೌಕಾ ಸರಬರಾಜು ಕೇಂದ್ರವಿದೆ. ಪರ್ಲ್ ಹಾರ್ಬರಿನ ಪ್ರವೇಶದ್ವಾರದ ಒಂದು ಬದಿಗೆ ವಾಯುಬಲದಾಣವೂ ಇವೆ.				(ಆರ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ